ಸಂಘಮಿತ್ರೆ  ಮೌರ್ಯಚಕ್ರವರ್ತಿ ಅಶೋಕನ ಮಗಳು. ಪ್ರಸಿದ್ಧ ಬೌದ್ಧಧರ್ಮ ಪ್ರಚಾರಕನಾದ ಅಶೋಕ (ಕ್ರಿ.ಪೂ.240ರಲ್ಲಿ) ಪಾಟಲಿಪುತ್ರ ದಲ್ಲಿ ಮೂರನೆಯ ಬೌದ್ಧ ಸಮ್ಮೇಳನವನ್ನು ಮೊಗ್ಗಲಿ ಪುತ್ತತಿಸ್ಸನ ಅಧ್ಯಕ್ಷತೆಯಲ್ಲಿ ನಡೆಸಿದ. ಈ ಸಮ್ಮೇಳನದಲ್ಲಿ ಬೌದ್ಧಸಂಘದ ಒಡಕಿಗೆ ಕಾರಣರಾಗಿದ್ದ ಭಿಕ್ಷುಗಳನ್ನು ಸಂಘದಿಂದ ಹೊರಹಾಕಲಾಯಿತು. ಬೌದ್ಧಧರ್ಮದಲ್ಲಿನ ವಿವಿಧ ಪಂಥಗಳ ನಡುವಣ ಭಿನ್ನಾಭಿಪ್ರಾಯಗಳನ್ನು ನಿವಾರಿಸಲಾಯಿತು. ಒಂಬತ್ತು ತಿಂಗಳು ಕಾರ್ಯ ಕಲಾಪ ನಡೆಸಿದ ಮೂರನೆಯ ಬೌದ್ಧ ಸಮ್ಮೇಳನದ ಕೊನೆಯಲ್ಲಿ ಬೌದ್ಧಧರ್ಮ ಪ್ರಸಾರ ಮಾಡಲು ಅನೇಕ ಭಿಕ್ಷುಗಳನ್ನು ದೇಶ ವಿದೇಶಗಳಿಗೆ ಕಳಿಸಿತು. ಅಶೋಕ ಬೌದ್ಧಧರ್ಮದ ಬೋಧನೆಗಳನ್ನು ಪ್ರಚಾರಗೊಳಿಸಲು ಬೌದ್ಧಧರ್ಮ ಪ್ರಚಾರಕರನ್ನು ಭಾರತದ ನಾನಾ ಭಾಗಗಳಿಗೆ ಮತ್ತು ವಿದೇಶಗಳಿಗೆ ಕಳಿಸಿದ. ಭಾರತದಲ್ಲಿ ಚೋಳ, ಪಾಂಡ್ಯ, ಕೇರಳ, ತಾಮ್ರಪರ್ಣಿ, ಸತ್ಯಪುತ್ರರರಾಜ್ಯ, ಆಂಧ್ರ, ಪುಳಿಂದ, ಕಾಂಬೋಜ, ನಭಕನಾಭ ಪಂಕ್ತಿಯರ ರಾಜ್ಯ (ಹಿಮಾಲಯ ಪ್ರಾಂತ್ಯ) ಮತ್ತು ವಿದೇಶಗಳಾದ ಸಿರಿಯ, ಈಜಿಪ್ಟ್, ಈಜಿಪ್ಟಿನ ಪಶ್ಚಿಮದಲ್ಲಿನ ಸೈರಿನಿ, ಮ್ಯಾಸಿಡೋನಿಯ, ಮ್ಯಾಸಿಡೋನಿ ಯಾದ ಪಶ್ಚಿಮದಲ್ಲಿನ ಎಪಿರಸ್ ದೇಶಗಳಿಗೆ ಬೌದ್ಧಧರ್ಮ ಪ್ರಚಾರಕರ ನಿಯೋಗ ಕಳಿಸಲಾಯಿತೆಂದು ಅಶೋಕನ ಹದಿಮೂರನೆಯ ಶಿಲಾಶಾಸನ ದಿಂದ ತಿಳಿದುಬರುತ್ತದೆ. ಅಶೋಕ ತನ್ನ ಮಗ ಮಹೇಂದ್ರ ಹಾಗೂ ಮಗಳು ಸಂಘಮಿತ್ರೆಯರನ್ನು ಧರ್ಮಪ್ರಚಾರಕ್ಕಾಗಿ ಸಿಂಹಳಕ್ಕೆ (ಶ್ರೀಲಂಕಾ) ಕಳಿಸಿದನೆಂದು ಬೌದ್ಧಧರ್ಮಗ್ರಂಥಗಳಲ್ಲಿ ಉಲ್ಲೇಖಗೊಂಡಿದೆ. ಈ ಧರ್ಮವಿಜಯ ಸಂಪೂರ್ಣವಾಗಿ ಫಲಪ್ರದವಾಯಿತು. ಸಿಂಹಳದ ದೊರೆ ತಿಷ್ಯನು ಬೌದ್ಧಧರ್ಮ ಸ್ವೀಕರಿಸಿ ಅನೇಕ ಚೈತ್ಯ, ವಿಹಾರಗಳು, ಸರೋವರ ಗಳು ಮತ್ತು ಪ್ರಾಸಾದಗಳನ್ನು ಬೌದ್ಧ ಭಿಕ್ಷುಗಳಿಗಾಗಿ ನಿರ್ಮಿಸಿದ. ಸಿಂಹಳದ ರಾಜಧಾನಿಯಾಗಿದ್ದ ಅನುರಾಧಪುರದಲ್ಲಿ ತಿಷ್ಯನು ಬುದ್ಧನ ಅವಶೇಷಗಳನ್ನೊಳಗೊಂಡ ಸ್ತೂಪನಿರ್ಮಿಸಿದ. ಸಿಂಹಳದ ಪ್ರಜೆಗಳು ತಮ್ಮ ದೊರೆ ತಿಷ್ಯನ ನಿದರ್ಶನವನ್ನು ಅನುಸರಿಸಿ ಬೌದ್ಧಧರ್ಮವನ್ನು ಸ್ವೀಕರಿಸಿದರು.					
					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ